Sunday, December 19, 2010

ದೇವ್ರು ನನಗೇ ಹೀಗೆ ಮೋಸ ಮಾಡಬಹುದ?

ಗೆಳತಿ, ಇಂದು ನನ್ನೊಡನೆ ನೀನಿಲ್ಲ. ಆದ್ರೂ... ನನಗೇನೂ ಬೇಜಾರಿಲ್ಲಾ ಕಣೇ ಚಿನ್ನು.....! ಯಾಕೆ ಗೊತ್ತಾ? ನೀ ದೂರಾದದ್ದು ನನ್ನ ಕಂಗಳಿಂದ ಮಾತ್ರ. ನನ್ನ ಮನಸ್ಸಿನ ನೆನಪುಗಳ ಪುಟಗಳಿಂದಲ್ಲ. ನಿನ್ನ ಜೊತೆ ಕಳೆದ ಕ್ಷಣಗಳನ್ನು ಕೋಟಿಜನ್ಮಗಳಾದ್ರೂ... ಮರೆಯಲು ಅಸಾದ್ಯ ಎನ್ನಿಂದ.
ಒಂದುವೇಳೆ ನಾನೇನಾದ್ರು... ದೇವದಾಸ್ ಥರ ಕುಡ್ದು-ಕುಡ್ದು ಪ್ರಾಣ ಬಿಟ್ರೆ ನನ್ನ ಬಗ್ಗೆ ನನ್ನಷ್ಟು ಖುಷಿ ಪಡೊ ಜೀವ ಈ ಧರಣಿಯಲ್ಲಿ ಇನ್ನೊ೦ದಿರಲಾರದು. ಯಾಕೆ ಗೊತ್ತಾ? ಈ ಪ್ರಾಣ ಹೋಗೋದು ನಿನಗೋಸ್ಕರವೇ ಜನಿಸಿದ ನನ್ನ ಪ್ರೀತಿಗೋಸ್ಕರ! .... ಚಿಂತೆ ಮಾಡ್ಬೇಡ ಚಿನ್ನು, ಹಾಗೆಲ್ಲಾ ಏನೂ ಆಗೋಲ್ಲ ನಂಗೆ. ನನ್ನದು ಆ ರೀತಿ ಕ್ಯಾರೆಕ್ಟರ್ ಅಲ್ಲ ಅನ್ನೋದು ಗೊತ್ತುತಾನೆ ನಿನಗೆ?

ನೀ ಈ ಸಮಾಜದ ದೃಷ್ಟಿಯಿಂದ ದಿವಂಗತಳಾಗಿ, ಈಗ್ಗೆ ಆರು ವರ್ಷಗಳೇ ಕಳೆದುಹೋಯ್ತು. ಈ ಆರು ವರ್ಷಗಳಲ್ಲಿ ನಿನ್ನನ್ನು ಯಾರು ನೆನಪು ಮಾಡಿಕೊಳ್ಳುತ್ತಿದ್ದಾರೋ.... ನಾ ಕಾಣೆ. ಆದರೆ, ನನ್ನ ಈ ಆರುವರುಷಗಳ ಪ್ರತಿಯೊಂದು ಕ್ಷಣಗಳಲ್ಲಿ, ನಿನ್ನ ನೆನಪುಗಳಿಲ್ಲದ ಯಾವೊಂದು ದೃಶ್ಯಗಳೂ ನನಗೆ ಸಿಗಲೇಇಲ್ಲ.
ನಿನ್ನ ಮೊದಲ ಸಲ ನಾ ದರುಶನಗೈದ ಆ ಸ್ಥಳ,
ನೀ ನನ್ನ ಮೊದಲ ಸಲ ಮಾತನಾಡಿಸಿದ ಆ ಕಾಫೀ ಶಾಪ್‌ಗಳನ್ನೆಲ್ಲ ನೋಡ್ತಿದ್ರೆ, ನನ್ನ ಕಂಗಳುಗಳು ನನ್ನ ಹದೀನ ತಪ್ಪುತ್ತಿವೆ.

ಚಿನ್ನು..! ನೀ ನನಗೆ ಯಾವಾಗ್ಲೂ ಒಂದು ಪ್ರಶ್ನೆ ಕೇಳುತ್ತಿದ್ದೆ. ನಿನಗೆ ನೆನಪಿದೆಯೇ ಅದು? "ಯಾಕೋ...! ನೀನ್ ಯಾವಾಗ್ಲೂ ಇಷ್ಟು  ಸೈಲೆ೦ಟಾಗಿರ್ತಿ? ತುಂಬಾ ಬೋರಾಗುತ್ತಪ್ಪ ನಿನ್ ಜೊತೆಗಿದ್ರೆ. ಏನಾದ್ರೂ ಮಾತ್ನಾಡೊ!" ಅಂತ. ಆದರೆ, ಈ ಪ್ರಶ್ನೆಗೆ ನಾ ಉತ್ತರಿಸುವ ಮುನ್ನವೇ ನೀ ನನ್ನ ನಿನ್ನ ಪ್ರೀತಿಯ ತಬ್ಬಲಿಯನ್ನಾಗಿ ಮಾಡಿ ಹೊರಟೇ ಬಿಟ್ಟೆ... ಎಷ್ಟೇ ಆಗ್ಲೀ ನಾ ನಿನ್ನ ತುಂಬಾನೇ ಬೋರ್ಹೊಡಿಸಿಬಿಟ್ಟಿದ್ದೆ ಅಲ್ವಾ?

ಆದರೆ ನೀ ಮಾತ್ರ ಯಾವೊಂದು ಕ್ಷಣಗಳಲ್ಲೂ ನನಗೆ ಬೋರ್ ಹೊಡೆಯುವ ಹಾಗೆ ನಡೆದುಕೊಂಡೇ ಇರಲಿಲ್ಲ. ಒಂದೇ ನಿಮಿಷಕ್ಕೆ ಅದೆಷ್ಟೋ ಮಾತ್ನಾಡಿಬಿಡುತ್ತಿದ್ದೆ ಕಣೇ ಮಾರಾಯ್ತಿ ನೀನು...!
ಆ ನಿನ್ನ ತರಲೆ ಪ್ರಶ್ನೆಗಳು, ಪದೇ-ಪದೇ ಡೈಲಾಗಿಗೆ ಮುನ್ನ ಮತ್ತು ನಂತರ ನನ್ನನ್ನು ನೀ 'ಗೂಬೆ,ಕತ್ತೆ,ಗುಗ್ಗು,...' ಅಂತೆಲ್ಲಾ ಬೈತಿದ್ದೆ. ಜೊತೆಗೆ ನೀ ಹಾಡೋ ಕೆಲವು ಮಾತುಗಳನ್ನು ಕೇಳುತ್ತಾ ನಾ ನಿನ್ನನ್ನೇ ನೋಡುತ್ತಿದ್ದಾಗ, ಇದ್ದಕ್ಕಿದ್ದಹಾಗೆ ಪೆದ್ದ ನಾಚಿಕೆ ಕೂಡಿದ ನಗೆಯೊಂದನ್ನು ನನ್ನೆಡೆಗೆ ಬಿಸಾಡಿಬಿಡುತ್ತಿದ್ದೆ. ಇವೆಲ್ಲಾ ನನಗೆ ನೀನು ಪ್ರತೀ ದಿನ ಹೊಸದಾಗಿ ಕಾಣುವಂತೆ ಮಾಡಿಬಿಡುತ್ತಿದ್ದವು. 'ನಾ ಬರೆಯೋ ಪ್ರತೀ ಕವನಗಳಿಗೂ ಸ್ಪೂರ್ತಿ, ನೀನೆ.' ಅಂತ ನಾ ಅಂದಾಗ,ನಾಚಿಕೆಯಿಂದ ನಗುತ್ತಾ 'ಇದು ಯಾಕೋ ಸ್ವಲ್ಪ ಜಾಸ್ತಿ ಆಯ್ತು ಕಣೋ' ಅಂತಿದ್ದೆ ನೀನು.

ನಿನಗೆ ಗೊತ್ತಾ ಚಿನ್ನು? ಮೊದಲೆಲ್ಲಾ ಪ್ರತೀದಿನಾ ಒಂದೊಂದು ಕವಿತೆ ಬರೆದು ನಿನ್ನ ಬಳಿ 'ಕವಿ' ಅನ್ನಿಸಿಕೊಂಡುಬಿಟ್ಟಿದ್ದೆ. ಆದ್ರೆ ಈ ಆರು ವರ್ಷಗಳು ನನ್ನ ಕೈಲಿ ಒಂದೇ ಒಂದು ಸಾಲೂಸಹ ಬರೆಯಲು ಸಾದ್ಯವಾಗಲೇ ಇಲ್ಲ.

ನಿನ್ನ ಆ ಬಿಗಿ ಅಪ್ಪುಗೆಇಲ್ಲದೆ ಈ ನನ್ನ ತೋಳುಗಳು ಶಕ್ತಿಹೀನವಾಗಿವೆ.
ಆ ನಿನ್ನ ತಲೆಯ ಬಾರದ ಹೊರೆ ಈ ಎನ್ನ ಭುಜಗಳಿಗೀಗಿಲ್ಲದೇ, ಅವು ಧೈರ್ಯ ಕಳೆದುಕೊಂಡಿವೆ. ನಿನ್ನ ಚಿನಕುರುಳಿ ಮಾತುಗಳ ಕೇಳದೆ ನನ್ನ ಕಿವಿಗಳು ಕಿವುಡಾದ೦ತಿವೆ. ನಿನ್ಹುಸಿರ ಬಿಸಿಗಾಳಿ ಇಲ್ಲದೆ ನನ್ಹೆಸರು ಬಿರುಗಾಳಿಯಲ್ಲಿ ಲೀನವಾಗಿಹೋಗುತ್ತಿರುವಹಾಗಿದೆ. ನನಗೆ ಇವನ್ನೆಲ್ಲ ನೆನಪು ಮಾಡಿಕೊಳ್ಳುತ್ತಿದ್ದರೆ ನನ್ನ ತುಟಿಗಳ ಮೇಲೆ ನನಗೇ ಗೊತಿಲ್ಲದಹಾಗೆ ಪುಟ್ಟ ನಗೆಯ ಜೊತೆ ಕಣ್ಣ ಹಾನಿಯೊಂದು ಜಾರಿಬೀಳುತ್ತದೆ.

ಪ್ರೇಯಸಿಗೋಸ್ಕರ ಪ್ರಾಣತ್ಯಾಗ ಮಾಡೋ ಸ್ವಭಾವ ನನ್ನದಲ್ಲ. ಬದಲಾಗಿ, ನನ್ನ ಇಡೀ ಜೀವನವನ್ನ ನಿನ್ನ ನೆನಪು ಮಾಡಿಕೊಳ್ಳುತ್ತಲೇ ಇರಲೆಂದೇ ಜೀವನ ಮೀಸಲಿಟ್ಟ ಹುಚ್ಚು ಪ್ರೇಮಿ ನಾನು. ಈಗ ಹೇಳೆ ಚಿನ್ನು...! ಆ ದೇವರು ನನ್ನ೦ಥವನಿಗೆ.... ಇಂತಹ ದ್ರೋಹ ಮಾಡಬಹುದಾ...?


-ಇಂತಿ ನೀನಿಲ್ಲದವ

No comments:

Post a Comment