2004 ನೇ ಇಸವಿಯ ಶಬ್ಧರಹಿತ ದಿವಂಗತ ಪ್ರೇಮ ಕಥನ
ಕೊನೆಗೂ ನಾ ನಿನಗೆ "ಹೇಳಿಬಿಡಬೇಕು" ಅಂತ ನಿರ್ಧಾರ ಮಾಡೇಬಿಟ್ಟೆ. ಆದ್ರೆ...! ಅದು ನಿನ್ ಎದುರಿನಲ್ಲಲ್ಲ. ಅದು ಈ ಪತ್ರದ ಮೂಲಕ. ಯಾಕೆಂದ್ರೆ....! ನನಗೆ ನಿನ್ನೆದುರು ನಿಂತು, ಮಾತ್ನಾಡೋ ಶಕ್ತೀನ ಆ ದೇವರು ಕೊನೆಗೂ ಕೊಡಲೇ ಇಲ್ಲ.
ಅದು 2004 ನೇ ಇಸವಿಯಲ್ಲಿ, ಬೆಂಗಳೂರು ಅನ್ನೋ ಒಂದು ಸುಂದರವಾದ ತಾಜ್ ಮಹಲ್ ನಲ್ಲಿ ನಡೆದ ಅಷ್ಟೇನೂ ಕುತೂಹಲಕಾರಿಯಲ್ಲದ ಒಂದು ಪುಟ್ಟ ಶಬ್ಧರಹಿತ ದಿವಂಗತ ಪ್ರೇಮ ಕಥನ.
"ನಾವೇನನ್ನೋ ಕಳೆದುಕೊಂಡಿದ್ದೀವಿ, ನಮಗೇನೋ ಹೊಸತುಬೇಕು" ಅನ್ನಿಸುವಂತ ವಯಸ್ಸಾಗಿತ್ತು ನನ್ನದು. ಅಂದ್ರೆ....! ನನಗಾಗ ಜಸ್ಟ್ ಹದಿನಾರು ವರ್ಷ.
ಆ ವಯಸ್ಸೇ ಹಾಗೆ, ಕಂಬಳಿ ಹುಳು ಚಿಟ್ಟೆಯಾಗೊ ಸಮಯದಂತೆ, ಮನಸ್ಸಿನಲ್ಲಿ ಅದೇನೇನೋ ಬಣ್ಣ ಬಣ್ಣದ ಆಸೆಗಳು ಹುಟ್ಟೋ ಕಾಲ. ಅದೇ ವಯಸ್ಸಿನಲ್ಲೇ "ನನಗೂ ಒಬ್ಬಳು ಗೆಳತಿ ಬೇಕು" ಎನ್ನಿಸಿದ್ದು. ಅದೇ ಕೇಡುಗಾಲಕ್ಕೆ ಅದೇ ಸಮಯದಲ್ಲೇ.... ನಿನ್ನನ್ನು ನನ್ನ ಎಸ್.ಎಸ್.ಎಲ್.ಸಿ ಟ್ಯೂಶನ್ ನಲ್ಲಿ ನೋಡಿದ್ದು.
ನೀನ್ಯಾಕೋ.... ಅವತ್ತು ನನಗೆ ಒಂಥರಾ ಸ್ಪೆಶಲ್ ಹುಡುಗಿ ಥರಾ ಕಾಣಿಸಿದ್ದೆ. ' ಆ ನಿನ್ನ ಮುಗ್ಧ ಸುಂದರ ಕಣ್ಣ್ ಗಳ ಮೇಲಿದ್ದಂತಾ ಕಾಡಿಗೆ, ಆ ಕಂಗಳಿಗೆ "ದೃಷ್ಟಿ ತಾಕುವುದೇನೋ" ಎನ್ನೋ ಭಯದಿಂದ ಹಾಕಿದ್ದಂಥ ಆ ನಿನ್ನ ಕನ್ನಡಕ. ಕಿರು ಮಿಂಚಿನಂತಿದ್ದ ಆ ನಿನ್ನ ನಗು, ಆ ನಗುವಿಗೆ ಮತ್ತಷ್ಟು ಶಕ್ತಿ ತುಂಬುತ್ತಿದ್ದ ನಿನ್ನ ಓರೆಯಾಗಿದ್ದ ಒಂದೇ ಒಂದು ಮೇಲ್ ಕೋರೆಹಲ್ಲು, ಇವನ್ನೆಲ್ಲಾ ನೋಡುತ್ತಿದ್ದಾಗ, ನನ್ನ ಮುಖದಿಂದ ಮಜಬೂತಾದ ನಗುವೊಂದು ಹುಟ್ಟಿ ಬಂದುಬಿಡುತ್ತಿತ್ತು.
ಇದೆಲ್ಲಾ ನನ್ ಜೀವನದಲ್ಲಿ ಎಂಟ್ರಿಕೊಟ್ಟ ಮೆಲೇನೇ, ನಾನು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನಾಲ್ಕು ಸಲ ಫೇಲಾದದ್ದು. ಆದ್ರೆ ನೀ ಮಾತ್ರ ಒಂದೇ ಸಲ ಪಾಸ್ ಮಾಡ್ಕೊಂಡು, ಕಾಲೇಜಿನ ಮೆಟ್ಟಿಲು ಹತ್ತೇಬಿಟ್ಟೆ. ಆದರೆ, ನನಗೆ ಮಾತ್ರ ಎಸ್.ಎಸ್.ಎಲ್.ಸಿ ಪಾಸ್ ಮಾಡಲು, ಎರಡು ವರ್ಷ ಬೇಕಾಯ್ತು. ಅಷ್ಟರಲ್ಲಿ ನೀನು ಮತ್ತು ನಿನ್ನ ಕುಟುಂಬದವರು ನೀವಿದ್ದ ಮನೆಯನ್ನ ಕಾಲಿ ಮಾಡಿಬಿಟ್ಟಿದ್ದಿರಿ. ನಂತರ ಮನಸ್ಸಲ್ಲೇ 'ನನ್ನ ಪ್ರೀತಿ ಪರಿಶುದ್ದವಾಗಿದ್ದರೆ ಅದು ನನಗೆ ಹೇಗಾದರೂ ಸಿಕ್ಕೇ ಸಿಗುತ್ತೆ" ಎಂದು ಭಾವಿಸಿ, ನನ್ನ ಮುಂದಿನ ವಿಧ್ಯಾಭ್ಯಾಸವನ್ನ ಮುಂದುವರಿಸಿದೆ. ಆ-ನಿಮೇಶನ್ ಅನ್ನೋ ಒಂದು ಸುಂದರ ಪ್ರಪಂಚಕ್ಕೆ. ಮತ್ತೆ ಎರಡು ವರ್ಷಗಳ ನಂತರ ನಾ ನನ್ನ ವಿಧ್ಯಾಭ್ಯಾಸ ಮುಗುಸಿ ತಕ್ಷಣವೇ ಒಳ್ಳೇ ಕೆಲಸವನ್ನೂ ಸಂಪಾದಿಸಿದೆ. ಆದರೆ ಆ ಎರಡು ವರ್ಷಗಳಲ್ಲಿ, ನಿನ್ನನ್ನು ನಾ ಜ್ಞಾಪಿಸಿಕೊಳ್ಳದ ಕ್ಷಣಗಳೇ ಇಲ್ಲ. ನಿನ್ನ ಹೆಸರಿರೋ ಯಾವೊಂದು ಪದವನ್ನ ನೋಡಿದ್ರೂ-ಕೇಳಿದ್ರೂ ನಿನ್ನದೇ ನೆನಪಾಗ್ತಿತ್ತು. ಕನ್ನಡಕ ಹಾಕಿದ ಯಾವ ಹುಡುಗಿಯನ್ನು ನೋಡಿದ್ರೂ... ನಿನ್ನನ್ನೇ ನೋಡಿದಹಾಗೆ ಆಗುತ್ತಿತ್ತು.
ಈ ನಾಲ್ಕು ವರ್ಷಗಳು ನಾ ನಿನ್ನ ನೋಡದೇ ಅದು ಹೇಗೆ ಇದ್ದೆ ಅನ್ನೋದನ್ನ ಮಾತ್ರ ಕೇಳ್ಬೇಡ. ಅದನ್ನ ನೆನೆಸಿಕೊಳ್ಳೋಕೆ ತುಂಬಾನೇ ಕಷ್ಟ ಆಗುತ್ತೆ ನನಗೆ.
ಈ ನಾಲ್ಕು ವರ್ಷಗಳ ನಂತರ, 'ನೀನು ಒಂದು ಶಾಪಿಂಗ್ ಮಾಲ್ ನಲ್ಲಿ ಕೆಲಸ ಮಾಡುತ್ತಿದ್ದೀ' ಅಂತ ಗೊತ್ತಾಯ್ತು. ಇದನ್ನ ಕೇಳಿ ಆಶ್ಚರ್ಯವಾಯಿತು. 'ತಿಂದ ಊಟದ ತಟ್ಟೆಯನ್ನೂ ಸಹಾ ನಿನ್ನ ಕೈಲಿ ಎತ್ತಿಸದ ನಿನ್ನ ತಂದೆಯವರು ಈಗ ಹೇಗೆ ನಿನ್ನನ್ನು ಕೆಲಸಕ್ಕೆ ಕಳಿಸಿದರು?'' ಅನ್ನೋ ಪ್ರಶ್ನೆಗೆ ' ನಿಮ್ಮ ಕುಟುಂಬದ ಆರ್ಥಿಕ ಪರೀಸ್ಥಿತಿ ಈಗ ಮೊದಲಿನಂತಿಲ್ಲ. ನಿನ್ನ ತಂದೆಯವರ ಆರೋಗ್ಯವೂ ಸಹ ಕೆಟ್ಟಿದೆ. ಹಾಗಾಗಿ ನೀನು ಕೆಲಸಕ್ಕೆ ಸೇರಿದ್ದೀಯ" ಅನ್ನೋದು ನನಗೆ ಗೊತ್ತಾಯ್ತು.
ಹಾಗೋ ಹೀಗೋ ನನ್ನ ಮೊದಲ ತಿಂಗಳ ಸಂಬಳ ಬ೦ದೇ ಬಿಟ್ಟಿತು. ಅವತ್ತು "ನಾ ನಿನ್ನನ್ನು ನೋಡಲೇ ಬೇಕು' ಅನ್ನೋ ಕಾತುರದಲ್ಲಿ ನೀ ಕೆಲಸ ಮಾಡೋ ಜಾಗಕ್ಕೆ ಬಂದೇಬಿಟ್ಟೆ. ನಿನ್ನನ್ನು ಅಲ್ಲಿ ಬಹಳಾನೇ ಹುಡುಕಾಡಿಬಿಟ್ಟೆ. ಆದರೆ, ನೀ ನನಗೆ ಸಿಗಲೇ ಇಲ್ಲ. ಅಲ್ಲೇ ಇದ್ದ ಒಂದು ಶರ್ಟ್ ಸೆಲೆಕ್ಟ್ ಮಾಡಿ, ಅಲ್ಲಿದ್ದ ಒಬ್ಬ ಸೇಲ್ಸ್ ಮನ್ ಗೆ 'ಈ ತರಹದ ನನ್ನ ಸೈಜ್ ಶರ್ಟ್ ಕೊಡ್ತೀರಾ?" ಅಂತ ಕೇಳಿದೆ. ಆದರೆ ನನಗೆ ನಂತರ ಶರ್ಟ್ ತಂದು ಕೊಟ್ಟಿದ್ದು ನೀನು...!
ಆದರೆ.... !
'ನಿನ್ನನ್ನು ನೋಡಬೇಕು ಎಂದು' ಅಷ್ಟೊಂದು ಆಸೆಯಿಂದ ಬಂದ ನನಗೆ ಅಲ್ಲಿ ಆ ಕ್ಷಣ ಖುಷಿಯಾಗಲಿಲ್ಲ. ಮೊದಲನೇ ಸಲ ನಾನಿನ್ನ ಕಂಡಾಗ ನಿನ್ನ ಕಣ್ಗಳಲ್ಲಿದ್ದ ಆ ಕಾಂತಿ ಇರಲಿಲ್ಲ. ನಿನ್ನ ಮುಖದಲ್ಲಿ ಸದಾ ಅರಳುತ್ತಿದ್ದ ಆ ಪುಟ್ಟ ನಗು ಸತ್ತು ಹೋಗಿತ್ತು. ನಿನ್ನ ಕಂಡಾಗ ನನ್ನ ತುಟಿಗಳ ಮೇಲೆ ಉಕ್ಕಿಬರುತ್ತಿತ್ತಲ್ಲ ಆ ನಗು? ಅದಕ್ಕೆ ಬದಲಾಗಿ ಈಗ ನನ್ನ ಕಂಗಳಲ್ಲಿ ನೀರು ತುಂಬೀಹೋಗಿತ್ತು. ಆದರೆ ಎಲ್ಲಕ್ಕಿಂತ ನನಗೆ ಅಲ್ಲಿ ನೋವುಂಟುಮಾಡಿದ ಸಂಗತಿಯೆಂದರೆ, ನೀ ನನ್ನನ್ನು ಕೊನೆಗೂ ಗುರುತು ಹಿಡಿಯಲೇ ಇಲ್ಲ. ಅಂದು ನಿನ್ನ ಕೈ ಸೋಕಿದ ಆ ಶಾರ್ಟ್ ಈಗಲೂ ಸಹಾ ನನ್ನ ಫೇವ್ ರೆಟ್ ಶರ್ಟ್ ಆಗಿದೆ, ನಿನ್ನಿಂದ ನಾ ಕದ್ದ ಕೆಲವು ವಸ್ತುಗಳನ್ನು ಇನ್ನೂ ನನ್ನ ಬಳಿಯೇ ಇರಿಸಿಕೊಂಡಿದ್ದೇನೇ
ಇಂತಿ ಈಗ ನಿನ್ನವನಲ್ಲದವ
No comments:
Post a Comment